ಜೋಗದ ಸಿರಿ

ಹಲವಾರು ದಿವಸದಿಂದ ನಾನು ಈ ನನ್ನ ಮೆಚ್ಚಿನ ತಾಣದ ಬಗ್ಗೆ ಬರೆಯಬೇಕೆಂದಿದ್ದೆ. ಯಾಕಂದ್ರೆ ಇದು ನನ್ನ ಬಾಲ್ಯದ ನೆನಪಿನ ಜೊತೆ ಕೂಡಿಕೊಂಡಿದೆ. ಇದರ ಬಗ್ಗೆ ನನ್ನ ಹಿಂದಿನ ಬ್ಲಾಗ್ಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಿದೆ. ಆದರೆ ನಾಲ್ಕಾರು ಸಾಲುಗಳಲ್ಲಿ ಇದನ್ನು ಮುಗಿಸಲಾಗಲ್ಲ. 


ನಮ್ಮ ಅಜ್ಜಿ ಮನೆ ದೂರದ ಭಟ್ಕಳದಲ್ಲಿರುವ ಅಳ್ವೆಕೋಡಿ  . ಚಿಕ್ಕಂದಿನಲ್ಲಿ ಅಲ್ಲಿಗೆ ಹೋಗುವಾಗ ಯಾವಾಗಲೂ ನಾವು ಹೊನ್ನಾವರ ಮಾರ್ಗದಲ್ಲೇ ಹೋಗ್ತಾ ಇದ್ದಿವಿ. ಬಸ್ ಜೋಗದ ಹತ್ತಿರ ಬಂದಾಗಲೆಲ್ಲ ನಾವು ಚಿಕ್ಕ ಮಕ್ಕಳಿಗೆ ಏನೋ ಒಂದು ಖುಷಿ. ಈ ಜಲಪಾತದ ಜೊತೆ ನಮ್ಮದೊಂದು ಅವಿನಾಭಾವ ಸಂಬಂಧ. ನಾನೋ ಅಪ್ಪ ಅಮ್ಮ ಹೇಳಿದ ಹಾಗೆ ಕುಳಿತುಕೊಳ್ಳುವವನು. ಆದರೆ ನಮ್ಮ ಅಣ್ಣ ಇದ್ದಾನಲ್ವಾ, ಅವನು ತುಂಟ. ಅಪ್ಪನ ಬೈಕ್ ತಗೊಂಡು ಜೋಗಕ್ಕೆ ಹೋಗೋದೆಲ್ಲ ಜೋರು. ಇನ್ನೂ ನನ್ನ ದೊಡ್ಡಪ್ಪನ ಮಗ ಕೂಡ ಅಲ್ಲಿಗೆ ಸ್ನೇಹಿತರ ಜೊತೆ ಹೋಗ್ತಾ ಇದ್ದ. ಇವರ ಬಾಯಿಯಿಂದ ಜೋಗ ಜೋರಾಗಿ  ಹರಿಯುತ್ತಿದೆ, ಜೋಗ ಹಾಗಿತ್ತು ಹೀಗಿತ್ತು ಎನ್ನುವಾಗಲೆಲ್ಲ ನನಗೆ ಜೋಗದ ಒಂದು ಹುಚ್ಚು ಹಿಡಿದಿತ್ತು. 

ಅಜ್ಜಿ ಮನೆಯಲ್ಲಿ ಆಡಿದ ಆಟ ಊರಲ್ಲಿ ಮಾಡ್ಲಿಕ್ಕೆ ಆಗ್ತಾ ಇರಲಿಲ್ಲ. ನಮ್ಮ ಅಪ್ಪ ಇಡೀ ಊರಿಗೆ ಪರಿಚಯ. ನಾನೇನೇ ಮಾಡಿದ್ರೂ ತಿಳಿದೋಗೋದು. ಜೋಗದ ಸಿರಿ ಎಂಬ ನಿಸ್ಸಾರ್ ಅಹ್ಮದ್ ಅವರ ಸಾಹಿತ್ಯ, ಮೂಗೂರು ಮಲ್ಲಪ್ಪ ಅವರ ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡೆ ಹಾಡು ಜನಪ್ರೀಯವಾಗಿತ್ತು.  ಹೀಗಿರುವಾಗ ಒಂದು ದಿನ ಜೋಗದ ಬಸ್ ಹತ್ತಿ ಹೊರಟೀ ಬಿಟ್ಟೆ. ಜೋಗದಲ್ಲಿ ಇಳಿದರೆ ಜನ ಜಂಗುಳಿ. ಕೇವಲ ೧೮ -೨೦ ಕಿ.ಮೀ ಇರುವ ಜೋಗ ಇಡೀ ಸಿದ್ದಾಪುರ, ಸಿರ್ಸಿ , ಸಾಗರದ ಕಲ್ಪನೆಯನ್ನು ಹಿಡಿದಿಟ್ಟಿತ್ತು.  ಆ ಜನ ಜುಂಗುಳಿಯಲ್ಲಿ ನನ್ನ ಕಲ್ಪನೆಗೂ ಮೀರಿ ಸುಂದರ ಹಾಗೂ  ಭಯಾನಕವಾಗಿ ಭೋರ್ಗರೆಯುತ್ತಿದ್ದ ಜೋಗದ ಸಿರಿಯನ್ನು ನೋಡಿ, ನಾನು ನಿಶ್ಯಬ್ಧನಾಗಿದ್ದೆ. ಮಳೆಗಾಲದಲ್ಲಿ ಈ ಜೋಗದ ಭಂಗಿಯನ್ನು ನೋಡುವಾಗ ಎಂತಹ ಕಲ್ಲು ಹೃದಯದವನನ್ನು ಕೂಡ ರೋಮಾಂಚನಗೊಳಿಸುತ್ತದೆ. 


ನಾನು ಸಾಗರದಲ್ಲಿ ಓದುತ್ತಿದ್ದಾಗ ಸಿದ್ಧಾಪುರದಿಂದ ಬಸ್ಸಿನಲ್ಲಿ ಹೋಗುತ್ತಿದ್ದೆ. ಶಿರಸಿ-ಬೆಂಗಳೂರು, ಮೈಸೂರು- ಕುಮಟ ಬಸ್ಸಿನಲ್ಲಿ ಹೋಗುವಾಗ ನಮ್ಮ ಆತ್ಮೀಯ ಕಂಡಕ್ಟರ್ ನಮಗೆ ಪ್ರಶ್ನೆ ಕೇಳುತ್ತಿದ್ದರು. ಜಲಪಾತ, ನದಿಗಳ ಬಗ್ಗೆ ಹೇಳುತ್ತಾ ಇದ್ದರು. ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಉಗಮವಾಗಿ ಪಶ್ಚಿಮೋಮುಖವಾಗಿ ಹರಿದು ಜೋಗ ಜಲಪಾತ ಸೃಷ್ಠಿಸಿ ಹೊನ್ನಾವರದಲ್ಲಿ ಅರಬ್ಬೀ ಸಮುದ್ರವನ್ನು ಸೇರುವ ಶರಾವತಿ ನದಿ ಬಗ್ಗೆ ಸ್ವಲ್ಪ ಜಾಸ್ತಿನೇ ಹೇಳಿದ್ದರು. ಉಂಚಳ್ಳಿ ಮತ್ತು ನಮ್ಮ ಪಶ್ಚಿಮಘಟ್ಟದ ವೈಶಿಷ್ಟ್ಯತೆ ಬಗ್ಗೆ ಹಲವು ಮಾಹಿತಿಗಳನ್ನು ತಿಳಿಸಿದ್ದರು. ಆ ಕಂಡಕ್ಟರ್ ಸರ್ ಈಗಲೂ ಕೂಡ ಸಿಕ್ಕಿದಾಗ ನನ್ನನ್ನು ಮಾತಾಡಿಸುತ್ತಾರೆ.  ನಿನ್ನ ಮರೆಯಲು ಸಾಧ್ಯನಾ ಅಂತ ಕೂಡ ಹೇಳುತ್ತಾರೆ. ಅವರ ನೋಡಿದಾಗೆ  ನನ್ನ ಬಾಲ್ಯದ ನೆನಪುಗಳು ಮರುಕಳಿಸುತ್ತದೆ.


 ಇಷ್ಟೆಲ್ಲಾ ಯಾಕೆ ಹೇಳಿದೆ ಅಂದರೆ ಈ ಜಲಪಾತ , ನದಿಗಳ ಬಗ್ಗೆ ಶಾಲೆಗಳಿಗಿಂತ ನಮ್ಮ ಸುತ್ತುಮುತ್ತಲಿನ ಜನರಿಂದ ತಿಳಿಯೋದು ತುಂಬಾ ಇರತ್ತೆ.  ಮನೆಗೆ ಬಂದ ಅತಿಥಿಗಳಿಗೆ ಜೋಗ ತೋರಿಸಬೇಕೆಂದು ಕರೆದುಕೊಂಡು ಹೋಗುವಾಗ ಅಲ್ಲೊಂದು ಸಂಭ್ರಮ. ನಾನೇ ಅವರಿಗೆಲ್ಲ ಮಾರ್ಗದರ್ಶಿ. ಮದುವೆಯಾದ ಒಂದೆರಡು ವರ್ಷದಲ್ಲಿ ನಾನು ನನ್ನ ಹೆಂಡತಿ ಜೊತೆ ಸಿದ್ದಾಪುರ , ಸಾಗರದ ಸುತ್ತ ಸುತ್ತಿದ್ದೆ. ಜೋಗ ನೋಡಲು ಹೋದಾಗ ನಮ್ಮಲ್ಲಿದ್ದ ಸಂಭ್ರಮ ಅಷ್ಟಿಷ್ಟಲ್ಲ. ವರ್ಷಗಳೇ ಕಳೆದರೂ ಜೋಗ, ಅಳ್ವೆಕೋಡಿ , ಮರವಂತೆ ನನ್ನ ಅವಿಭಾಜ್ಯ ಅಂಗವಾಗಿದೆ. ಮರವಂತೆ ಬಗ್ಗೆ ಇನ್ನೊಮ್ಮೆ ಹೇಳುವೆ. 

ಕರ್ನಾಟಕದ ಮುಖ್ಯವಾದ ಜಲ ವಿದ್ಯುತ್ ಸ್ಥಾವರ ಜೋಗದಲ್ಲಿದೆ. ಇದು ಸರ್ ಎಂ ವಿಶ್ವೇಶ್ವರಯ್ಯನವರ ಒಂದು ಸುಂದರ ಕನಸು. ಶರಾವತಿ ನದಿಗೆ ಜೋಗದ ಹತ್ತಿರ ಇರುವ ಲಿಂಗನಮುಕ್ಕಿ ಅಲ್ಲಿ ಆಣೆಕಟ್ಟೊಂದು ಕಟ್ಟಿದ್ದಾರೆ. ಇದು ನಿರ್ಭಂಧಿತ ಪ್ರದೇಶವಾದ್ದರಿಂದ  ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಆದರೆ ವಿಶೇಷ ಅನುಮತಿ ದೊರಕಿದಲ್ಲಿ ನಿಮಗೆ ಪ್ರವೇಶ ಸಿಗಬಹುದು.  

ಅದರ ಬದಲು ಜೋಗದ ಸಮೀಪ ಇರುವ ಶರಾವತಿ ಹಿನ್ನೀರು ನೋಡಬಹುದು .  ಅಲ್ಲೇ ಇರೋದು ನಮ್ಮ ಹೊನ್ನೇಮರುಡು. ರಾಫ್ಟಿಂಗ್ ಮತ್ತಿತರ ಜಲ ಕ್ರೀಡೆ ಇಲ್ಲಿ ಆಡಲು ಜನ ಬರುತ್ತಾರೆ.  ಜೋಗದ ಸುತ್ತ ಹಲವಾರು ರಮಣೀಯ ಸ್ಥಳಗಳಿವೆ.  ಬಂಗಾರ ಕುಸುಮ , ದಬ್ಬೆ ಫಾಲ್ಸ್ ,   ಕಾನೂರು ಕೋಟೆ , ಭೀಮೇಶ್ವರ ಫಾಲ್ಸ್ ಹೀಗೆ  ಮುಂತಾದ ಸ್ಥಳಗಳಿವೆ. ಇಂತಹ ಸುಂದರ ತಾಣಗಳ ನಡುವೆ ಬೆಳೆದೀರುವ ನಾವೇ ಧನ್ಯ. ಊರಿಗೆ ಹೋದಾಗೆಲ್ಲ ಹೊಸ ಅನ್ವೇಷಣೆ ಚಾಲ್ತಿಯಲ್ಲಿ ಇರುತ್ತದೆ. ಸಿರ್ಸಿ ಹತ್ತಿರ ಇನ್ನೂ ಹಲವಾರು ಜಲಪಾತಗಳಿವೆ. ಅವುಗಳಲ್ಲಿ ಕೆಲವೊಂದು ಇನ್ನೂ ನೋಡಬೇಕಿದೆ.  ಹೀಗೆ ಮತ್ತೊಂದು ಕಥೆ , ಮತ್ತೊಂದು ನಿಸರ್ಗದ ತಾಣವನ್ನು ನಿಮ್ಮ ಮುಂದೆ ತರಲು ಪ್ರಯತ್ನಿಸುತ್ತೇನೆ. ಸದಾ ಹೀಗೆ ನನ್ನ ಪ್ರೋತ್ಸಾಹಿಸುತ್ತೀರಿ. 

ಇಂತಿ ನಿಮ್ಮ 
ಅಲೆಮಾರಿ ಕವಿ 


Previous
Next Post »

2 comments

Write comments
pawnacampers
AUTHOR
December 17, 2024 at 8:59 PM delete

I admired Pawna Campers' orderly setup and calm ambiance at Pawna Lake. The ideal location for a weekend getaway!
pawna lake camping

Reply
avatar
August 21, 2025 at 11:21 PM delete

Excellent read, Positive site, where did u come up with the information on this posting?
I have read a few of the articles on your website now, and I really like your style.
Thanks a million and please keep up the effective work.
sydney city tour
Private Hunter valley wine tours from Sydney
blue mountains tour
partner visa migration agents

Reply
avatar