ಸೋಮಾವತಿ ಜಲಪಾತ , ಹನುಮಗುಂಡಿ ಜಲಪಾತ, ಹೊರನಾಡು

ಕುದುರೆಮುಖ  ಚಾರಣ ಮುಗಿದಿತ್ತು. ನೋವು ಇನ್ನೂ ಇತ್ತು. ಇನ್ನು ಮುಂದೆ ಎಲ್ಲಿಗೆ ಹೋಗೋದು ಎಂಬ ಚರ್ಚೆಯಲ್ಲೇ ಮುಳುಗಿ ನಾವು ನಿದ್ದೆಯಿಂದ ಎದ್ದಿದ್ದೆವು. ಕಾರ್ತಿಕ್ ಮತ್ತು ತಂಡ ತಮ್ಮ ಚಾರಣಕ್ಕೆ ಸಿದ್ದರಾಗಿದ್ದರು. ಅವರಿಗೆ ವಿದಾಯ ಹೇಳಿ ನಮ್ಮ ಬೆಳಗಿನ ಕಾರ್ಯ ಮುಗಿಸಿ ಸೋಮಾವತಿ ಜಲಪಾತಕ್ಕೆ ಹೊರಡಲು ಸಿದ್ಧರಾದೆವು.

 ಸೋಮಾವತಿ ಜಲಪಾತ :

 ಸೋಮಾವತಿ ಜಲಪಾತ


ಅನಿಲ ಆಗಲೇ ಅದು ಎಲ್ಲಿದೆ ಎಂದು ನೋಡಿ ಬಂದಿದ್ದ. ತೂಸು ದೂರದಲ್ಲಿ ಇದ್ದ ಜಲಪಾತಕ್ಕೆ ನಾವು ತಲುಪಿದಾಗ ನನ್ನ ಮತ್ತು ಅಬ್ದುಲ್ಲ ಬಿಟ್ಟು ಅನಿಲಾದಿಗಳು ನೀರಿನಲ್ಲಿ ಇಳಿದರು. ಕೊನೆಗೆ ನಾನೂ ಸೇರಿ ಕೊಂಡೆ. ಕಾಲು ನೋವಾಗಿದ್ದರಿಂದ ನಿಧಾನವಾಗಿ ಚಲಿಸುತ್ತ ಒಂದು ಬಂಡೆ ಹತ್ತಿದೆ. ಇನ್ನೇನು ಒಂದು ಕಾಲನ್ನು ನೀರಿನಲ್ಲಿ ಹಾಕಲು ದಂಗಾದೆ. ಅದು ಒಂದು ಪ್ರಪಾತ. ಎರಡೂ ಕಾಲು ಹಾಕಿದ್ದರೆ ಬಂಡೆಗಳ ನಡುವೆ ನಾನು ಪ್ರಪಾತಕ್ಕೆ ತಳ್ಳಲ್ಪಡುತ್ತಿದ್ದೆ. ಅನಿಲ ಮತ್ತು ಅದರ್ಶನಿಗೂ ಹೇಳಿದೆ ಜೋಪಾನ ಎಂದು. ಅಂತೂ ಇಂತೂ ನೀರಿನಲ್ಲಿ ಬೇಕಾದಷ್ಟು ಆಡಿ ಹಿಂತಿರುಗಿದಾಗ ತಿಂಡಿ ಸಿದ್ಧವಾಗಿತ್ತು. ಸ್ನಾನ ಮಾಡಿ ತಿಂಡಿ ತಿಂದು ಜೀಪಿನಲ್ಲಿ ಕಳಸ ಹೋದೆವು. ಏಟಿಎಂನಿಂದ ಹಣ ತೆಗೆದು ಜೀಪಿನಲ್ಲೇ ಬಾಳೆಗಲ್ಗೆ ಬಂದು ಮಂಗಳೂರು ಬಸ್ ಹತ್ತಿದೆವು.   

ಹನುಮಗುಂಡಿ ಜಲಪಾತ :

 ಗಂಗಾಮೂಲಕ್ಕೆ  ಹೋಗಬೇಕೆಂದು ನಾವು ಬಸ್ಸನ್ನು ಹತ್ತಿದ್ದೆವು. ಆದರೆ ಕಂಡಕ್ಟರ್ ಹೇಳಿದ, ಗಂಗಾಮೂಲ ಪ್ರವೇಶಕ್ಕೆ ಹನುಮಗುಂಡಿ ಜಲಪಾತದ ಹತ್ತಿರ ಟಿಕೆಟ್ ಸಿಗತ್ತೆ ಎಂದು. ಹಾಗೆಯೇ ಅಲ್ಲಿ ಹೋದರೆ ನಮಗೆ ಗೊತ್ತಾಗಿದ್ದು ಗಂಗಾಮೂಲ ಪ್ರವೇಶ ನಿಷೇದಿಸಲಾಗಿದೆ. ಆದರೂ ಪ್ರವೇಶ ಪಡೆಯ ಬಯಸುವವರು ಕಾರ್ಕಳದ ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆಯಬೇಕು.ಗಂಗಾಮೂಲ ಒಂದು ನಕ್ಸಲ್ ಪ್ರದೇಶ ಎಂದು ನನಗೆ ಅರಿವಿರಲಿಲ್ಲ. ಇನ್ನೇನು ಬಂದಾಗಿತ್ತು. ಹನುಮಗುಂಡಿ ಜಲಪಾತ ಟಿಕೆಟ್ ಪಡೆದು ಮೆಟ್ಟಿಲು ಇಳಿದೆವು. ಹಾಗೂ ಹೀಗೂ ಮೆಟ್ಟಿಲು ಇಳಿದು ಜಲಪಾತ ನೋಡಿದಾಗ ಅನ್ನಿಸಿತು, ಇಲ್ಲಿ ಬಂದಿದ್ದು ನಮ್ಮ ಪುಣ್ಯ ಎಂದು. 


 ಹನುಮಗುಂಡಿ ಜಲಪಾತ

ಜಲಪಾತದ ಪಕ್ಕದಲ್ಲಿ ನಿಂತು ನೋಡುತ್ತಾ ಸಮಯ ಹೋಗಿದ್ದೆ ತಿಳಿಯಲಿಲ್ಲ. ಮಳೆ ಹನಿ ತಲೆಗೆ ತಟ್ಟಿದಾಗ ಅರಿವಾಯ್ತು ನಾವಿನ್ನು ಹೊರಡುವ ಸಮಯ ಎಂದು. ಆದರೆ ಮಳೆರಾಯ ಬಿಡ ಬೇಕಲ್ಲ. ನಾವು ಮೆಟ್ಟಿಲು ಹತ್ತಿ ಮೇಲೆ ಇದ್ದ ವಿಶ್ರಾಂತಿ ಗೂಡಿಗೆ ಸೇರಿದಾಗ ಮಳೆ ಇನ್ನೂ ಜೋರಾಯ್ತು . ಒಂದು ತಾಸು ಅಲ್ಲೇ ಕುಳಿತೆವು.

ಕೊನೆಗೂ ಮಳೆ ನಿಂತಾಗ ಮೋಡ ಕವಿದ ವಾತಾವರಣ ಇನ್ನೂ ಇತ್ತು. ಬೇಗ ಬೇಗ  ಬಸ್ ಹತ್ತಿ ಕಳಸ ಹೋದೆವು. ಹೊಟ್ಟೆ ಚುರುಗುಟ್ಟುತ್ತಿತ್ತು. ಹೊಟ್ಟೆಗೆ ಸ್ವಲ್ಪ ಹಾಕಿ ಹೊರನಾಡು ಬಸ್ ಹತ್ತಿದೆವು.

ಹೊರನಾಡು 

 ಹೊರನಾಡು ಅನ್ನಪೂರ್ಣೇಶ್ವರಿಯ ಸ್ಥಾನ. ಇಲ್ಲಿ ಬಂದು ಬೇಡಿದವರಿಗೆ ಎಂದೂ ಅನ್ನಕ್ಕೆನೂ ಕಡಿಮೆ ಇಲ್ಲ ಎಂಬ ಮಾತಿದೆ. ಹೊರನಾಡಿಗೆ ಚಿಕ್ಕವನಿದ್ದಾಗ ಬಂದಿದ್ದೆ. ಇಲ್ಲಿಯ ಊಟದ ರುಚಿ ಇನ್ನೂ ಮರೆತಿಲ್ಲ. ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವರಿಸಿರುವ ಈ ಪ್ರದೇಶ ನೋಡಲೂ ರಮಣಿಯವಾಗಿದೆ.

 ಸುತ್ತಲೂ ಪರ್ವತ

ಹಿಂದೆ  ಸಭಾ ಮಂಟಪ
ಚಪ್ಪಲಿ ಮತ್ತು ಲಗೇಜು ಅಲ್ಲೇ ಕೌಂಟರ್ನಲ್ಲಿ ಇಟ್ಟು ದಣಿದಿದ್ದ ದೇಹಕ್ಕೆ ಸ್ವಲ್ಪ ನೀರು ಹಾಕಲು ಅಲ್ಲೇ ಮುಂದೆ ಇದ್ದ ಶೌಚಾಲಯ ಮತ್ತು ಸ್ನಾನಗೃಹಕ್ಕೆ ಹೋದೆವು.ಕೈ ಕಾಲು ಮುಖ ತೊಳೆದು ದೇವಸ್ಥಾನಕ್ಕೆ ಹೋದೆವು.

ದೇವಸ್ಥಾನ ಧ್ವಾರದ ಮುಂದೆ

ದೇವಸ್ಥಾನಕ್ಕೆ ಹೋಗೋದಕ್ಕಿಂತ ನಾನು ಊಟಕ್ಕೆ ಹೋಗಲು ಉತ್ಸೂಕನಾಗಿದ್ದೆ. ದೇವಸ್ತಾನದಲ್ಲಿ ಅಮ್ಮನವರ  ದರ್ಶನ ಮಾಡಿ ಹೊರಗೆ ಬಂದರೆ ಊಟ ಶುರು ಆಗಲು ಇನ್ನೂ ಸಮಯ ಇತ್ತು . ದೇವಸ್ತಾನದ ಹಿಂದೆ ಇದ್ದ ಅಂಗಡಿಗೆ ಹೋಗಿ ಅಲ್ಲಿದ್ದ ಮಣಿ ಮಾಲೆಗಳನ್ನು ನೋಡಲು ಪ್ರಾರಂಬಿಸಿದೆವು. ಆದರ್ಶ ಜಪ ಮಾಲೆಗಳನ್ನು ತೆಗೆದು ಕೊಂಡರೆ ನಮ್ಮ ಕಣ್ಣು ಚಿಪ್ಸ್ ಮೇಲೆ ಹೋದವು. ಅಬ್ದುಲ್ಲ ಚಿಪ್ಸ್ ತೆಗೆದುಕೊಂಡು ಬಂದು ದೇವಸ್ಥಾನದ ಮುಂದೆ ಕುಳಿತುಕೊಂಡ. ನಾವೂ ಚಿಪ್ಸ್ಗಾಗಿ ಅಲ್ಲೇ ಕುಳಿತೆವು. ಹೊಟ್ಟೆ ಹಸಿವಾಗಿದ್ದರಿಂದ ಚಿಪ್ಸ್ ಬೇಗನೆ ಖಾಲಿಯಾಯಿತು . 

ದೇವಸ್ಥಾನದ ಹಿಂದೆ ಇದ್ದ ಅಂಗಡಿ
ಅಲ್ಲೇ ವರಾಂಡದಲ್ಲಿ ಕುಳಿತು ಮೇಲೆ ನೋಡುತ್ತಿದ್ದೆ. ಚಂದ ಮಾಮ, ತೆಂಗಿನ ಮರ ಮತ್ತು ಜೋರಾಗಿ ಬೀಸುತ್ತಿರುವ  ಗಾಳಿ ಉನ್ಮಾದಗೊಳಿಸಿತ್ತು. ನಾನು ಅಜ್ಜಿ ಮನೆ ಮುಂದೆ ಇದ್ದ ತೆಂಗಿನ ಮರದ ಕೆಳಗೆ ಕುಳಿತು ಬೆರೆಯಲು ಪ್ರಾರಂಭಿಸಿದ ದಿನಗಳು ನೆನಪಿಗೆ ಬಂದವು. ಆ ನೆನಪಿನಲ್ಲೇ ನಾನು ಬರೆದ ಕವನ ಕೂಡ ನೆನಪಿಗೆ ಬಂತು. ಆ ಕವನ ಬರೆದಾಗ ನನ್ನ ಗೆಳೆಯರು ಕಾಲು ಎಳೆದಿದ್ದು ನೆನಪಿಗೆ ಬಂತು. ಇಲ್ಲಿದೆ ಆ ಕವನ  " ಕತ್ತಲು "  .  

ಚಂದಿರ, ತೆಂಗಿನ ಮರ ಮತ್ತು ಕ್ಯಾಮೆರಾ

ಒಂದು ಸಲ ಅಜ್ಜಿ ಕೂಡ ನೆನಪಿಗೆ ಬಂದಳು. ಕಣ್ಣಲ್ಲಿ ಬಂದ ಹನಿಗಳು ನನಗೆ ತಿಳಿಯಲಿಲ್ಲ. ಅಜ್ಜಿಯನ್ನು ನೋಡುವ ಒಂದೇ ಒಂದು ಕಾರಣ ಸಾಕಿತ್ತು ನಾನು ಅಳ್ವೆಕೊಡಿ ಹೋಗಲು. ಈಗ ಅಜ್ಜಿ ಇಲ್ಲಾದ್ದರಿಂದ ಅಲ್ಲಿಗೆ ಹೋಗೋದು ಕಡಿಮೆ. ಹಾಗೆ ಕಣ್ಣು ವರೆಸಿಕೊಂಡೆ. ಊಟಕ್ಕೆ ಎಲ್ಲರೂ ಹೋಗುತ್ತಿದ್ದಿದ್ದು ಕಂಡು ಬಂತು. ಅವರನ್ನು ಹಿಂಬಾಲಿಸಿದೆವು. ಪಾಯಸ, ರಸಂ ಎಲ್ಲವೂ ಚೆನ್ನಾಗಿತ್ತು.  ಇಲ್ಲಿಯ ಊಟ ಯಾಕೋ ಅಮೃತದಂತೆ. ಅದಕ್ಕೆ ಇರಬೇಕು ಅನ್ನಪೂರ್ಣೆಶ್ವರಿ ಎಂದು ಈ ತಾಯಿಗೆ ಹೆಸರು.




ನಿಧಾನವಾಗಿ ಊಟ ಮಾಡಿ ಹೊರಗೆ ನಡೆದೆವು. ಕೌಂಟರ್ನಲ್ಲಿ ಲಗೇಜು ಮತ್ತು ಚಪ್ಪಲಿ/ಬೂಟು ತೆಗೆದು ಕೊಂಡು ಹೊರಗೆ ನಡೆದಾಗ ನಮಗೇನೋ ಆತ್ಮ ಸಂತೃಪ್ತಿ. ಅಲ್ಲೇ ಟಿಕೆಟ್ ಬುಕ್ ಮಾಡಿದ ಬಸ್ ಬಂದಿತ್ತು. ಕೊನೆಯಿಂದ ೨ ನೇ ಸಾಲಿನಲ್ಲಿದ್ದ ನಮ್ಮ ಸೀಟಿನಲ್ಲಿ ವೀರಾಜಮಾನರಾದೆವು. ನನ್ನ ಪಕ್ಕ ಅನಿಲ ಕುಳಿತಿದ್ದ. ಬಲ ಬದಿಯಲ್ಲಿ ಆದರ್ಶ್ ಮತ್ತು ಅಬ್ದುಲ್ಲ. ಮುಂದಿನ ಸಾಲಿನಲ್ಲಿ ಚೇತನ ಕೂತಿದ್ದ. ನನ್ನ ಸೀಟು ಯಾಕೋ ಹಿಂದೆ ಸರಿಯುತ್ತಿರಲಿಲ್ಲ. ರಾಜಹಂಸ ಬಸ್ಸಿನ ಅವಸ್ತೆ ಗೊತ್ತೇ ಇದೆ. ನನ್ನ ಮ್ಯೂಸಿಕ್ ಪ್ಲೇಯರ್ ಹಚ್ಚಿ ಕಣ್ಣು ಮುಚ್ಚಿ ಮಲಗಿದೆ. ಕಣ್ಣು ತೆರೆದಾಗ ಬೆಳಗಾಗಿತ್ತು. ನೆಲಮಂಗಲ ತಲುಪಾಗಿತ್ತು. ಒಂದು ಹೊತ್ತು ನಾನು ಸ್ವಪ್ನದಿಂದ ಹೊರಗೆ ಬಂದಂತಿತ್ತು. ನಾವು ಜೀವನದಲ್ಲಿ ಮುಂದೆ ಹೋದಾಗ ಹಿಂತಿರುಗಿ ನೋಡಿದಾಗ ಇವೇ ನೆನಪುಗಳು ನಮ್ಮನ್ನು ಜೀವಿಸಲು ಪ್ರೇರೇಪಿಸುತ್ತವೆ. ಅದಕ್ಕೆ ನಾನು ಹೇಳೋದು ಪ್ರಯಾಣ ಯಾವಾಗಲೂ ಹೊಸ ಮನುಷ್ಯನನ್ನು ರೂಪಿಸುತ್ತದೆ. 

Previous
Next Post »