ಆಗುಂಬೆ, ಮಲೆನಾಡಿನ ಕಿರೀಟ

ಕಾಲೇಜಿನಲ್ಲಿ ಇದ್ದಾಗ ಜೀವ ಶಾಸ್ತ್ರ ಒಂದು ಕಬ್ಬಿಣದ ಕಡಲೆಯಂತೆ ಇದ್ದಿತ್ತು. ನಾನು ಅತಿಯಾಗಿ ಗೌರವಿಸುವ ಗುರುಗಳಲ್ಲಿ ಒಬ್ಬರಾದ ಕುಮಾರ ಹೆಗ್ಡೆ ಸರ್ ನನ್ನನ್ನು ಚಿತ್ರದ ವಿಷಯದಲ್ಲಿ ಪೀಡಿಸಿದಂತೂ ನಿಜ. ಪಾಠ ಮಾಡುವಾಗ ದೇವರಂತೇ ಕಾಣಿಸುತ್ತಿದ್ದವರು ಒಮ್ಮೆಲೇ ಪ್ರಯೋಗಶಾಲೆಯಲ್ಲಿ ಖಳನಾಯಕನಾಗಿ ಬಿಡುತ್ತಿದ್ದರು. ಆದರೂ ಅವರು ನನ್ನ ಅಚ್ಚು ಮೆಚ್ಚಿನ ಗುರುಗಳಾಗಿದ್ದರು . ಒಮ್ಮೊಮ್ಮೆ ಕಾಡಿನಲ್ಲಿ ಚಾರಣಕ್ಕೆ ಹೋದಾಗ ಮರಗಳನ್ನು ಮುಟ್ಟಿದಾಗಲೆಲ್ಲಾ ಅವರು ಜ್ಞಾಪಕವಾಗಿದ್ದುಂಟು. ಕೆಲವೊಮ್ಮೆ ಕನಸಿನಲ್ಲಿ ಬಂದು ಕಾಡಿನ ಮರಗಳ ಬಗ್ಗೆ ಹೇಳುವುದುಂಟು. ಕೆಲವೊಮ್ಮೆ ನಾವು ಏನು ಕಳೆದು ಕೊಂಡಿದ್ದೇವೆ ಅಂತ ಅದರಿಂದ ತುಂಬಾ ದೂರ ಹೋದಾಗ ಅರಿವಾಗುತ್ತದೆ. ಡೆಹ್ರಾಡೂನೀನ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ಹೋದಾಗ ಒಂದು ಜ್ಞಾನ ಬಂಡಾರವೇ ಮುಂದೆ ನಿಂತಂತಿತ್ತು. ಕೇವಲ ಒಂದು ಮರದ ಬೇರಿನಲ್ಲಿ ಎಷ್ಟೊಂದು ವಿಜ್ಞಾನವಿದೆ ಎಂದು ಅರಿವಾದಾಗ  ಮೈಯೆಲ್ಲ ಜುಮ್ ಎನ್ನುತ್ತೆ.

ಡೆಹ್ರಾಡೂನೀನ ಅನುಬವ ಮರಯಲಾರದ್ದು, ಆದರೆ ಅದಕ್ಕಿಂತ ಮರೆಯಲಾರದ್ದು ಪಶ್ಚಿಮ ಘಟ್ಟಗಳ ಅನುಭವ. ಎಷ್ಟೋ ನಿಗೂಢ ರಹಸ್ಯವನ್ನೇ ತುಂಬಿಕೊಂಡಿ ಮಲಗಿರುವ ಈ ತಾಯಿ ನಿಜಕ್ಕೂ ಅದ್ಭುತವೇ . ಅರೀತಷ್ಟು ನಿಗೂಢವಾಗಿ ಕಾಣಿಸುವ ಈ ತಾಯಿ ಸುದ್ಧಿಗೆ ಹೋದರೆ ಪ್ರವಾಹ , ಪ್ರತಾಪ ಎಲ್ಲವನ್ನೂ ತೋರಿಸುತ್ತದೆ. ಇದನ್ನು ನಿಲಕ್ಷಿಸುತ್ತಿರುವ ಅಜ್ಞಾನಿ ರಾಜಕಾರಣಿಗಳಿಗೆ ಏನು ಹೇಳುವುದು. ಅದು ಬಿಡಿ, ನನಗೆ ಈ ಪಶ್ಚಿಮ ಘಟ್ಟಗಳ ದೃಶ್ಯಗಳು ಸರ್ವೇ ಸಾಮಾನ್ಯ. ಹುಟ್ಟಿದ್ದು , ಬೆಳೆದದ್ದು ಮಲೆನಾಡಿನಲ್ಲೇ ಆದುದ್ದರಿಂದ ಕಾಡು ಮರಗಳು ಹತ್ತಿರ. ಆದರೆ ಅದನ್ನು ಇನ್ನೂ ಹತ್ತಿರ ಮಾಡಿದ್ದು ತೇಜಸ್ವಿ ಅವರ ಪುಸ್ತಕ ಮತ್ತು ಚಾರಣ. ಸುಬ್ರತೊ ಬಗಚಿ ಅವರ ಪುಸ್ತಕದಲ್ಲಿ ಓದಿದ ನೆನಪು. ನಮ್ಮ ಎಡ ಮೆದಳು ಎಷ್ಟು ಒಳ್ಳೆಯದೋ ಅಷ್ಟೇ ಬಲ ಮೆದಳು ಕೂಡ ಅಗತ್ಯ. ನಮ್ಮ ಬಲ ಮೆದುಳು ನಮ್ಮಲ್ಲಿರುವ ಕರುಣೆ , ಕನೀಕರ , ಮನುಷ್ಯತ್ವವನ್ನು ಜಾಗೃತಗೊಳಿಸುತ್ತದೆ. ಆದರೆ ನಾವು ಐಕ್ಯು ನೋಡುವಾಗ ಕೇವಲ ನಮ್ಮ ಎಡ ಮೆದಳು ಹಾಗು ಸಮಸ್ಯೆ ಪರೀಹರಿಸುವ ಯೋಗ್ಯತೆಯ ಮೇಲೆ ತಿಳಿಯುತ್ತೇವೆ. ಇದೊಂದು ನಮ್ಮ ತಪ್ಪು ವಿಧಾನ ಅಂದರೇ ತಪ್ಪಾಗಲಾರದು. ಇಂತಹ ಒಂದು ಚರ್ಚೆಯೊಂದಿಗೆ ನಾನು ನಿಮ್ಮನ್ನು ಕರೆದುಕೊಂಡಿ ಹೋಗುತ್ತಿರುವುದು ಒಂದು ಸಾಮಾನ್ಯ ಸ್ಥಳಕ್ಕಲ್ಲ. ಇದು ಸರ್ಪಗಳ ತವರೂರು. ಪಶ್ಚಿಮಘಟ್ಟದ ಹೃಧಯ ಭಾಗ ಅಂದರೂ ಅನ್ನಬಹುದು.

ಧಕ್ಷಿಣ ಭಾರತದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದೇ ಗುರುತಿಸಲ್ಪಡುವ ಆಗುಂಬೆ ಯಾರಿಗೇ ಗೊತ್ತಿಲ್ಲ ಹೇಳಿ.

ಆಗುಂಬೆಯ ಬಗ್ಗೆ ಎರಡು ಮಾತಗಳಲ್ಲಿ ಹೇಳಲು ಸಾಧ್ಯವಿಲ್ಲಾ. ಆಗುಂಬೆ ತನ್ನಲ್ಲಿ ಹಲವಾರು ರಹಸ್ಯವನ್ನೇ ಅಡಗಿ ಕುಳಿತುಕೊಂಡಿದೆ. ಎಲ್ಲಿ ವಿಷವಿದೆ, ಎಲ್ಲಿ ಅಮೃತವಿದೆ ಎಂದು ಹೇಳಲಾರದ ವಿಚಿತ್ರ ಕಾಡುಗಳನ್ನೇ ಹೊಂದಿರುವ ಆಗುಂಬೆ ಒಂದು ಪ್ರಕೃತಿಯ ವಿಸ್ಮಯ. ಕರ್ನಾಟಕದ ಕೆಲವೊಂದು ಪ್ರದೇಶ ಎಷ್ಟು ನೋಡಿದ್ರೂ ಅಲ್ಲೇನೋ ಇನ್ನೂ ನೋಡುವಂತಹದು ಏನೋ ಇದೆ ಎಂದು ಭಾಸವಾಗುತ್ತದೆ. ಸಾಗರ - ಸಿದ್ದಾಪುರ - ಸಿರ್ಸಿಯ ಸುತ್ತಮುತ್ತ ಹಾಗು ದಾಂಡೇಲಿ - ಯಲ್ಲಾಪುರದ ಸುತ್ತಮುತ್ತಲಿನ ವೈವಿಧ್ಯತೆ ಒಂದು ಕಡೆಯಾದರೆ ಆಗುಂಬೆ ಸುತ್ತಲಿನ ಜಾನಪದ ಮತ್ತು ರಹಸ್ಯಮಯ ಕಾಡುಗಳು ಇನ್ನೊಂದು ಕಡೆ. ದಾಂಡೇಲಿಯ ಕಾಳಿ ನದಿ ಒಂದು ಕೆಡೆಯಾದರೆ ಆಗುಂಬೆಯ ದಟ್ಟ ಕಾಡುಗಳು ಇನ್ನೊಂದು ಕಡೆ. ಹವ್ಯಕ ಸಾಹಿತ್ಯ ಒಂದು ಕಡೆಯಾದರೆ, ದಿಗ್ಗಜರ ತೀರ್ಥಹಳ್ಳಿ ಒಂದು ಕಡೆ. ಸಾಹಿತ್ಯ , ಸಂಗೀತ , ಯಕ್ಷಗಾನ , ಕಲೆಗಳ ಲೋಕದಲ್ಲಿ ಮರೆಯಾಗಲು ಯಾರು ಇಷ್ಟಪಡಲ್ಲ ಹೇಳಿ. ಕಾನೂರು ಕೋಟೆಯಿಂದ ಹಿಡಿದು ಕವಲೇದುರ್ಗದವರೆಗೂ ಕೋಟೆಗಳ ಇತಿಹಾಸ ಅಡಗಿದೆ. ಅತಿ ಹೆಚ್ಚು ಜಲಪಾತ ಇರುವ ಹಚ್ಚ ಹಸುರಾದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ದೇಶದ ಯಾವ ಜಿಲ್ಲೆಯೂ ಸಾಟಿಯಿಲ್ಲಾ.

ಇನ್ನು ಆಗುಂಬೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಂದರೆ ಇದೊಂದು ಜ್ಞಾನದ ತವರೂರು. ಮೊದಲೇ ಹೇಳಿದ ಹಾಗೆ ಪಶ್ಚಿಮ ಘಟ್ಟಗಳ ಹಚ್ಚ ಹಸುರಾದ ಪ್ರದೇಶ ಈ ಆಗುಂಬೆ. ಇಲ್ಲಿನ ಸೂರ್ಯಾಸ್ತವೇ ಜನರಿಗೆ ಅಚ್ಚುಮೆಚ್ಚು. ಇತ್ತೀಚಿನ ದಿನಗಳಲ್ಲಿ ಹತ್ತಿರ ಇರುವ ಕುಂದಾದ್ರಿ ಬೆಟ್ಟ ಸೂರ್ಯಾಸ್ತ ನೋಡಲು ಪ್ರಸಕ್ತ ಸ್ಥಳ. ಆಲ್ಲಿ ಸೂರ್ಯೋದವೂ ಅಷ್ಟೇ ಸುಂದರವಾಗಿ ಕಾಣಿಸುತ್ತದೆ. ಕೋಟೆಗಳು , ಜಲಪಾತಗಳು , ಯಕ್ಷಗಾನ, ಸಾಹಿತ್ಯ ಲೋಕದ ದಿಗ್ಗಜರುಗಳ ನೆನಪುಗಳು, ತೂಸು ದೂರದಲ್ಲಿ ಇರುವ ಧಾರ್ಮಿಕ ಸ್ಟಳಗಳು , ಆನೆಗಳ ಹಿಂಡು , ಪಕ್ಷಿಧಾಮಗಳು, ಗಿಡಮೂಲಿಕೆಗಳು, ಇನ್ನೂ ಅತಿಯಾಗಿ ಹಿಡಿಸುವ ಜನ ಮತ್ತು ವೈವಿಧ್ಯಮಯ ತಿಂಡಿ ತಿನಿಸುಗಳು ; ಒಂದೋ ಎರಡೋ, ಆಗುಂಬೆಯನ್ನು ಪ್ರೀತಿಸಲು ಇಷ್ಟು ಸಾಲದೇ !!! ಅದರಲ್ಲೂ ಇಲ್ಲೇ ಇರುವ ನರಸಿಂಹ ಪರ್ವತ ಹತ್ತುವ ಕನಸು ಕೆಲವರಿಗೆ ಸ್ವರ್ಗಕ್ಕೆ ಮೂರೇ ಇಂಚು.

ನಾನು ಕೊಪ್ಪಕ್ಕೆ ಬಂದಾಗ , ಮಘೇಭೈಲ್ ಜಲಪಾತಕ್ಕೆ ಹೋಗಿದ್ದೆ. ಆಗ ಅಲ್ಲಿನ ಭಟ್ಟರು ಮನೆಯಲ್ಲಿ ಮಾತಾಡುವಾಗ ಅವರು ನರಸಿಂಹ ಪರ್ವತದ ವೈಶಿಷ್ಟ್ಯವನ್ನು ವಿವರಿಸಿದ್ದರು. ಅದಾದ ನಂತರ ಅಲ್ಲಿಗೆ ಹೋಗುವ ಎಲ್ಲ ಪ್ರಯತ್ನಗಳು ವಿಫಲ ಯತ್ನವೇ ಆಗಿತ್ತು. ಮೊದಲ ಸಲ ಹೋಗುವ ತಯಾರಿ ಮಾಡಿದಾಗ ಕೊನೆ ಗಳಿಗೆಯಲ್ಲಿ ಯಾರೋ ದಡ್ಡರ ಕಿತಾಪತಿಯಿಂದ ಹೋಗಲಾಗಲಿಲ್ಲ. ಅವರು ಹಾಕಿದ ಬೆಂಕಿಯಿಂದ ಕಾಡಿನ ಹುಲ್ಲಿಗೆ ಬೆಂಕಿ ತಾಗಿ ಚಾರಣಕ್ಕೆ ನಿಷೇಧಾಜ್ಞೆ ಬಿದ್ದಿತ್ತು. ಆಮೇಲೆ ಅತಿಯಾದ ಮಳೆಯಿಂದ , ಕಾಡ್ಗಿಚ್ಚಿನಿಂದ ಅದು ಕನಸಾಗೇ ಉಳೀತು. ನಾವು ಎಲ್ಲ ಯೋಜನೆ ಮುಗಿಸಿ ಇದಕ್ಕೆ ಬರುವಾಗ ಏನಾದರೊಂದು ಅಡಚಣೆ ನಮಗೆ ಎದುರಾಗಿತ್ತು.

ಆದರೆ ಹಿಂದಿನ ವರ್ಷ ಹೇಗೂ ಮಾಡಿ ಶರಾವತಿ ಕಣಿವೆಯ ಗೆಳೆಯ (ನಮ್ಮ ಏನ್. ಜಿ . ಓ . ತಂಡದ ಗೆಳೆಯ ) ಸಂದೀಪನ ಜೊತೆ ಮಾತಾಡಿ ಅವಿನ್ ಎನ್ನುವವರೊಂದಿಗೆ ಮಾತಾಡಿದೆ. ೮ ಜನ ಬರುತ್ತೇವೆ ಎಂದವರು ೩ಜನಕ್ಕೆ ಸೀಮಿತವಾಯಿತು ನಮ್ಮ ಚಾರಣ. ನಾನು , ಸರ್ವೇಶ (ನನ್ನ ಜಮ್ಮು ಸ್ನೇಹಿತ), ಸಾಯಿನಾಥ (ಆಂಧ್ರದ ಸ್ನೇಹಿತ) ಜೊತೆ ೩ ಗಂಟೆಗೆ ತೀರ್ಥ್ಶಹಳ್ಳಿಗೆ ಬಂದು ಇಳಿದೆವು. ೫ ರ ಆಸುಪಾಸಿಗೆ ಆಗುಂಬೆಗೆ ಬಸ್ಸಿತ್ತು. ಅಲ್ಲಿಯವರೆಗೆ ಮಂಗಳೂರು ಬನ್ಸ್ ಮತ್ತು ಕಾಫಿ ಕುಡಿಯುತ್ತ ಬಸ್ ಸ್ಟ್ಯಾಂಡಿನ ಕ್ಯಾಂಟೀನ್ನಲ್ಲಿ ಕುಳಿತೆವು.

ತೀರ್ಥಹಳ್ಳಿಯ ಬೀದಿ ಬೀದಿ ಅಲೆದಾಡಿದ್ದೂ ಆಯಿತು. ನಾಯಿಗಳ ಕಾಟವ ನಿರ್ಲಕ್ಷಿಸಿ ಮುನ್ನುಗ್ಗಿದ್ದು ನಮ್ಮ ಸಾಹಸವೇ ಸರಿ. ತೀರ್ಥಹಳ್ಳಿಯ ಸ್ಟೇಟ್ ಬ್ಯಾಂಕ್ ಹತ್ತಿರ ಬಂದಾಗ ಅಲ್ಲಿಗೆ ಹಿಂದೆ ಬಂದ ನೆನಪು. ನನ್ನ ಬಾವನ ಮಾವ ವಸಂತ ಮಾವ ಅಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ನೆನಪು. ಹಾಗೆ ತಿರುಗಾಡಿ ಬಸ್ ಸ್ಟ್ಯಾಂಡಿಗೆ ಬಂದಾಗ ಇನ್ನೊಂದು ಲೋಟ ಕಾಫಿ ಕುಡಿದು ಬಸ್ಸಿಗೆ ಕಾಯುತ್ತಿರಲು ಆಗುಂಬೆ ಆಗುಂಬೆ ಎನ್ನುವ ಕಂಡಕ್ಟರ್ ಧ್ವನಿ ಕೇಳಿಸಿತು.

ಅದೋ ನಮ್ಮ ಪುಷ್ಪಕ ವಿಮಾನ !!! ಡ್ರೈವರಣ್ಣ ಹೊಡಿಯುತ್ತಿದ್ದ ವೇಗ ನೋಡಿದ್ರೆ ನೀವೂ ಕೂಡ ಪುಷ್ಪಕ ವಿಮಾನ ಅಂತಾನೇ ಕರೀತಿದ್ರಿ. ತನ್ನದೇ ಲೋಕದಲ್ಲಿ ಮೈ ಮರೆಯುವ ಸಾಯಿಗೆ ಕುಳಿತಲ್ಲಿಯೇ ನಿದ್ದೆ ಮಾಡುವ ಚಾಳಿ. ಆಮೇಲೆ ನಾನು ನಿದ್ದೇನೇ ಮಾಡಿಲ್ಲ ಎನ್ನುವ ವಕಾಲತ್ತು. ಇನ್ನೋ ಸರ್ವೇಶ ನಂಗೆ ತುಂಬಾ ಹತ್ತಿರದ ವ್ಯಕ್ತಿ. ಒಂದು ಪರೀಪಕ್ವ ಹೃದಯ ಅವರದು. ಎಲ್ಲವನ್ನೂ ಯೋಚಿಸಿ ಮಾತನಾಡುವ ವ್ಯಕ್ತಿತ್ವ. ಇವರಿಬ್ಬರೂ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ತಂಪು ಗಾಳಿಗೆ ತಮ್ಮನ್ನೇ ಮರೆತಂತೆ ಸಂತುಷ್ಟ ಭಾವದಲ್ಲಿ ಕುಳಿತಿದ್ದರು. ನಾನೋ ಬಸ್ಸಿನ ಬಾಗಿಲಲ್ಲಿ ನಿಂತಿದ್ದೆ. ಬಸಿನ್ನ ವೇಗಕ್ಕೆ ತಲೆ ಮತ್ತು ಮೈ ಭಾಗುತ್ತ ಕಿಡಕಿ ಆಚೆಗೆ ನೋಟ ನೆಟ್ಟು ನನ್ನ ನಾ ಮರೆತಿದ್ದೆ.

ಬೆಳಗ್ಗೆ ಆಗುಂಬೆ ಬಂದಾಗ ಅಲ್ಲೇ ಒಂದು ರೂಮ್ ತೆಗೆದುಕೊಂಡು ಶುಚಿ ಕಾರ್ಯಕ್ರಮ ಮುಗಿಸಿ ಅಲ್ಲೇ ಹತ್ತಿರ ಇದ್ದ ಕ್ಯಾಂಟೀನ್ನಲ್ಲಿ ಅವಿನ್ ಗೆ ಕಾಯುತ್ತಾ ಕುಳಿತಿದ್ದೆವು. ಕಾಫೀ ಆಯಿತು , ಅವಲಕ್ಕಿ ಉಪ್ಪಿಟ್ಟೂ ಆಯಿತು. ಮಲೆನಾಡಿನ ಜೀನ ಶೈಲಿ ಮತ್ತು ಅಲ್ಲಿಯ ಆಹಾರ ಶೈಲಿಯೇ ವಿಭಿನ್ನವಾದುದು. ಬಿಸಿ ಕಾಯಿ ಕಡುಬು ಚಟ್ನಿಯ ಜೊತೆ ಹಾಕಿ ಕೊಂಡು ಮನೆಯ ಜಗಲಿ ಮೇಲೆ ತಿನ್ನುತ್ತಿದ್ದರೆ ಅದೇ ಸ್ವರ್ಗ. ಕಾಯಿ ಕಡುಬು ಮನೆಯಲ್ಲಿ ಮಾತ್ರ ಮಾಡುವುದು ಇಲ್ಲಿ. ಹೋಟೆಲಲ್ಲಿ ಸಿಗುವುದು ಕಡಿಮೆ.ಕೊಡಗು, ಚಿಕ್ಕ ಮಗಳೂರಿನ ಕಡೆ ಚಾರಣಕ್ಕೆ ಹೋದಾಗ , ಆಗುಂಬೆಯ ಚಳಿ ಮಳೆಯಲ್ಲಿ ಈ ಕಡುಬೇ ನನ್ನ ಪ್ರಿಯ ಆಹಾರ. ಕರಾವಳಿಗೆ ಹೋದಾಗ ಬನ್ಸ್ ಮತ್ತು ಮಸಾಲೆ ದೋಸೆ ಇದ್ದ ಹಾಗೆ ಇಲ್ಲಿ ಈ ಕಾಯಿ ಕಡುಬು.

ಅವಿನ್ ಬಂದು ನಮ್ಮನ್ನು ಜೀಪನ್ನು ಹತ್ತಲು ಹೇಳಿದಾಗ ನಂಗೊಂದು ರೀತಿಯ ಖುಷಿ. ನನಗೆ ಈ ರೀತಿಯ ತೆರೆದ ಜೀಪಿನಲ್ಲಿ ಸವಾರಿ ಅಂದರೆ ತುಂಬಾ ಇಷ್ಟ. ಆ ಕಡೆ ಈ ಕಡೆ ಜಿಗಿಯುತ್ತ ಗಟ್ಟಿಯಾಗಿ ಜೀಪಿನ ಕಬ್ಬಿಣದ ಕಂಬಿ ಹಿಡಿದು ಕೊಂಡು ಹೋಗುವ ಆ ಸವಾರಿ ಆನೆ ಸವಾರಿ ಅಂತನೇ ತಿಳಿಯಿರಿ. ಹಳ್ಳಿಯ ಗದ್ದೆ ಮರಗಳನ್ನು ದಾಟಿ ಹೋಗುವಾಗ ನಮಗೆ ಒಂದು ರೀತಿಯ ವಿಭಿನ್ನ ಅನುಭವ.







ಅವಿನ್ ಮನೆ ಮುಂದೆ ಬಂದು ನಿಂತಾಗ ಆಗಲೇ ೨ - ೩ ಗುಂಪು ಚಾರಣಕ್ಕೆ ಸಿದ್ಧವಾಗಿದ್ದರು. ಕಡಬು ರೆಡಿ ಆಗಿತ್ತು. ಹೊಟ್ಟೆ ತುಂಬಿದ್ದರೂ ಕಡಬುಗೆ ಬೇಡ ಅನ್ನಲಾಗಲಿಲ್ಲ. ತಿಂದು ಬೀಗಿದ ಮೇಲೆ ಅಲ್ಲೇ ಇದ್ದ ಗದ್ದೆಯ ಪಕ್ಕದಲ್ಲಿ ಫೋಟೋ ಕ್ಲಿಕ್ಕಿಸುತ್ತಾ ನಮ್ಮ ಮಾರ್ಗದರ್ಶಕರಿಗೆ ಕಾಯುತ್ತಾ ಕಾಲ ಕಳೆದೆವು. ಒಂದೊಂದು ಗುಂಪಿಗೂ ಒಬ್ಬ ಮಾರ್ಗದರ್ಶಕ. ಅವನು ಬಂದಾಗ ನಮ್ಮಲ್ಲಿ ಒಂದು ಹುರುಪು. ಕೊನೆಗೂ ನರಸಿಂಹ ಪರ್ವತ ಹತ್ತುತ್ತಿದ್ದೇವೆ ಎನ್ನುವ ಒಂದು ನಿಟ್ಟುಸೀರು ಕೂಡ. ಗದ್ದೆ ದಾಟಿ ಕಾಡಿನ ಪ್ರಾರಂಭಕ್ಕೆ ಬಂದಾಗ ಮಗಿವಿನಂತೆ ನಮ್ಮ ಮನಸ್ಸು ಮತ್ತು ಕಣ್ಣು ಅಲ್ಲಲ್ಲಿ ನರ್ತಿಸಿತು. 





ಬೆಟ್ಟ ಹತ್ತುತ ಬರ್ಕಣದತ್ತ ಹತ್ತಿರ ಬಂದಾಗ ನಾನು ಜಿಗಿದೆ. ಕಿರಿದಾದ ದಾರಿಯಲ್ಲಿ ಮರಗಳ ಮೇಲೆ ಸಾವಕಾಶವಾಗಿ ನಡೆಯುತ್ತಾ ಬರ್ಕಣದ ತುದಿ ತಲುಪಿದೆ. ಮೇಲಿಂದ ಕೆಳಗೆ ನೋಡಿದರೆ ಯಾರಿಗಾದರೂ ಹೃದಯ ದಸಕ್ಕೆನ್ನಬಹುದು. ದೇಶದ ಎತ್ತರದ ಜಲಪಾತಗಳಲ್ಲಿ ಒಂದಾದ ಬರ್ಕಣದ ತುದಿಯಲ್ಲಿ ನಾವಿದ್ದೆವು. ವಿಶ್ವವನ್ನೇ ಸುತ್ತಿದವರಿಗೆ ಇದೇನು ಮಹಾ. ಆದರೆ ನಾನಿನ್ನೂ ಬಚ್ಚಾ. ನನಗೆ ಪ್ರತಿಯೊಂದು ಅನುಭವ ಜೀವಿಸಲು ಒಂದು ಕಾರಣ. ಜಲಪಾತದ ಎತ್ತರದಿಂದ ನೋಡಿದಾಗ ಅನಿಸತ್ತೆ, ತಾನೇ ದೊಡ್ಡವರೆಂದು ಬೀಗುವವರೆಲ್ಲಾ ಹೀಗೆ ಎತ್ತರದಿಂದ ಪ್ರಪಾತಕ್ಕೆ ಬೀಳುತ್ತಾರೆ ಎಂದು. ಕಾಡಿನ ಮಧ್ಯದಲ್ಲಿ ನಿಂತಾಗ ನಾನೆಷ್ಟು ಚಿಕ್ಕವನು ಎಂದು ಅರಿವಾಗತ್ತೆ. ಹಾಗೆ ನಾನು ಈ ನಿಸರ್ಗಕ್ಕೊಸ್ಕರ ಏನು ಮಾಡಿದ್ದೇನೆ, ಏನು ಮಾಡಬಹುದು ಎನ್ನೋ ಪ್ರಶ್ನೆ ಬಡಿದ್ದೆಬ್ಬಿಸತ್ತೆ.







ಆಗುಂಬೆ ದೇಶದ ಕೆಲವೇ ಮಳೆ ಕಾಡಿನಲ್ಲಿ ಒಂದು. ಸರ್ಪಗಳೇ ಜಾಸ್ತಿ ಇರುತ್ತಿದ್ದ ಕಾಲವಿತ್ತು. ಈಗ ಅವುಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಕಣ್ಣಿಗೆ ಕಾಣಿಸುವುದಂತೂ ತುಂಬಾ ಕಡಿಮೆ. ಈ ಕಾಡಿನಲ್ಲಿ ಜೀವ ಕಾಪಾಡುವ ಗಿಡಮೂಲಿಕೆಗಳು ತುಂಬಾ ಇವೆ. ಹಾಗೆಯೇ ನಮ್ಮನ್ನು ಕ್ಷಣ ಮಾತ್ರದಲ್ಲಿ ಜೀವ ತೆಗೆಯುವ ವಿಷದ ಹಣ್ಣುಗಳೂ ಇವೆ.



ಇಂಟು ದಿ ವೈಲ್ಡ್ ಎನ್ನುವ ಆಂಗ್ಲ ಚಲನ ಚಿತ್ರ ನೋಡಿದವರಿಗೆ ಇದು ಅರೀವಾಗತ್ತೆ. ಅದರಲ್ಲಿ ಮುಖ್ಯ ಪಾತ್ರಧಾರಿ ಎಲ್ಲವನ್ನೂ ಬಿಟ್ಟು ಪ್ರವಾಸ ಮಾಡುತ್ತಾ ಸಾಗುತ್ತಿರುವಾಗ ಒಂದು ಕಾಡು ತಲಪುತ್ತಾನೆ. ಅದೊಂದು ದೊಡ್ಡ ಕಾಡೇ. ಪುಸ್ತಕದಲ್ಲಿ ಓದಿ ಒಂದು ಗಿಡಮೂಲಿಕೆ ತಿನ್ನುತ್ತಾನೆ. ಆದರೆ ಅವನು ತಪ್ಪಾಗಿ ತಿಂದದ್ದು ಕಣ್ಣಿನ ದೃಷ್ಟಿ ತೆಗೆಯುವ ಒಂದು ಸಸ್ಯದ ಎಲೆ. ಕಣ್ಣಿನ ದೃಷ್ಟಿ ಕಳೆದುಕೊಂಡು ಕೊನೆಗೂ ಆ ಸಾಹಸಿ ಕೆಲವು ದಿನದ ನಂತರ ಅದೇ ಕಾಡಲ್ಲಿ ಅಸುನೀಗುತ್ತಾನೆ. ಕಾಡಿನಲ್ಲಿ ತಮ್ಮನ್ನು ತಾವು ಕಂಡುಕೊಂಡವರಿದ್ದರೇ , ಹಾಗೆ ತಮ್ಮ ಪ್ರಾಣ ಬಿಟ್ಟವರೂ ಇದ್ದಾರೆ.


ಈ ಚಾರಣದಲ್ಲಿ ತೊಡಗಿದ ನನ್ನ ಗೆಳೆಯರೆಲ್ಲ ಯಾವುದೊಂದಾದರೂ ರೀತಿಯಲ್ಲಿ ವಿಭಿನ್ನರು. ನಾನು ಕೆಲವೊಮ್ಮೆ ಅಂತರ್ಮುಖಿ. ನಂಗೆ ತುಂಬಾ ಸ್ನೇಹಿತರೀರಬಹುದು. ಆದರೆ ನನ್ನ ವಿಚಾರಗಳನ್ನು ಗೌರವಿಸುವ ಕೆಲವೇ ಕೆಲವು ಸ್ನೇಹಿತರಲ್ಲಿ ಹೆಚ್ಚಿನವರು ಈ ಚಾರಣಾರ್ಥಿಗಳು. ನನ್ನ ಜೊತೆ ಐದಕ್ಕಿಂತ ಹೆಚ್ಚು ಚಾರಣ ಮಾಡಿದವರ ಜೊತೆ ನನ್ನ ಒಡನಾಟವೇ ವಿಭಿನ್ನ. ಕಾಡನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆ ಎಲ್ಲರಿಗೂ ಇರಲ್ಲ. ಕೆಲವರು ಶೋಕಿಗೋಸ್ಕರ ಕಾಡಿಗೆ ಬರುತ್ತಾರೆ. ನನ್ನ ಸ್ನೇಹಿತರು ಹಾಗಲ್ಲ. ಅವರಿಂದ ಕಲಿತದ್ದು ಅಪಾರ. ಬಹುಷಃ ನನ್ನ ಜೀವನದಲ್ಲಿ ಚಾರಣದಲ್ಲಿ ಕಲಿತಷ್ಟು ಬೇರೆಲ್ಲೂ ಕಲಿಯಲಿಲ್ಲ ಅಂತ ಹೇಳಬಹುದು. ನನ್ನ ಜೊತೆ ಈ ಸಮಯದಲ್ಲಿ ಇದ್ದ ಎಲ್ಲಾ ಚಾರಣಾರ್ಥಿಗಳಿಗೆ ನನ್ನ ಕೃತಜ್ಞತೆಗಳು.

ಇಂಟು ದಿ ವೈಲ್ಡ್ ಚಲನಚಿತ್ರದ ಬಗ್ಗೆ ಹೇಳುತ್ತಾ ನನ್ನ ಗೆಳೆಯರ ಬಗ್ಗೆನೂ ಹೇಳಬೇಕೆಂದೆನಿಸಿತು, ಅದಕ್ಕೆ ಇಲ್ಲಿ ಬರೆದೆ . ಹಾಗೆ ಬರ್ಕಣದ ಸ್ವಲ್ಪ ಮುಂದೆ ಹೋದೆವು. ದಟ್ಟ ಕಾಡು ದಾಟಿ ಹಲವಾರು ಬೆಟ್ಟ ದಾಟಿ ನರಸಿಂಹ ಪರ್ವತ ಮುಟ್ಟಿದಾಗ ಒಂದು ನೆಮ್ಮದಿ. ನಾವೆಲ್ಲರೂ ಒಂದೊಂದು ದಿಕ್ಕಿನಲ್ಲಿ ಸ್ವರ್ಗದ ನಾಲ್ಕು ದ್ವಾರಗಳನ್ನು ನೋಡುತ್ತಾ ನಮ್ಮನ್ನು ಸಂಪೂರ್ಣವಾಗಿ ಮರೆತೆವು. ಅದೆಷ್ಟೋ ದಿನದ ಕನಸು ನನಸಾಗಿದ್ದಕ್ಕೆ ಒಂದು ತಣ್ಣನೆಯ ಗಾಳಿ ನನ್ನ ಬೆವರನ್ನು ತಾಕಿದಾಗ ಆ ಸ್ಪರ್ಶವೇ ಬೇರೆ. ರೋಮಾಂಚನದ ಸ್ಪರ್ಶವದು. ಆಗುಂಬೆಯನ್ನು ಅರಿಯಲು ಬಂದವರಿಗೆ ಆ ತಾಯಿ ಇಂದಿಗೂ ಮೋಸ ಮಾಡಿಲ್ಲ. ಮಾಲ್ಗುಡಿ ಡೇಸ್ , ಆಗುಂಬೆ ಸಂಶೋಧನಾ ಕೇಂದ್ರವಿರಬಹುದು , ವನ್ಯ ಜೀವಿ ಛಾಯಾಚಿತ್ರ ಆಗಿರಬಹುದು, ವೈಜ್ಞಾನಿಕ ನೆಲೆಯಲ್ಲಿ ಇಲ್ಲಿ ಬರಲು ಕಾರಣದ ಸಾಲೇ ಇದೆ. ಇಂತಹ ಒಂದು ಸ್ಥಳ ಬೇರೆಲ್ಲೂ ಇಲ್ಲ ಅಂತ ನನ್ನ ಅನಿಸೀಕೆ. ಕಲಿಯಲು ಒಂದು ಪುಸ್ತಕ ಬಂಡಾರದಂತೆ ಈ ಕಾಡು.




ಚಾರಣಕ್ಕೆ ಹೋದಾಗ ನನಗೆ ಪರಿಚಯವಿದ್ದದ್ದು ಇಬ್ಬರು ಮಾತ್ರ. ಮುಗಿದಾಗ ಅಲ್ಲೇ ನಾವು ಇನ್ನೀತರ ಚಾರಣಾರ್ಥಿಗಳ ಜೊತೆ ಹಲವು ವಿಚಾರ ವಿನಿಮಯ ಮಾಡಿಕೊಂಡೆವು. ಕಾಡಿನ ಬಗ್ಗೆ, ಜೀವನದ ಬಗ್ಗೆ, ಜ್ಞಾನದ ಬಗ್ಗೆ, ಆಧ್ಯಾತ್ಮದ ಬಗ್ಗೆ ಒಂದಿಷ್ಟು ವಿಷಯಗಳು ಅಲ್ಲಿ ಮೂಡಿ ಬಂದಿರತ್ತೆ. ಹಾಗೆ ಮಾತಾಡುವಾಗ ನಮಗೆ ತಿಳಿದದ್ದು ಆಗುಂಬೆ ಮಳೆ ಕಾಡು ಸಂಶೋಧನಾ ಕೇಂದ್ರದ ಬಗ್ಗೆ.

ದೇಶದ ಸರ್ಪಗಳ ರಾಜ ಅಂತಾನೆ ಕರೆಯಲ್ಪಡುವ , ಧಕ್ಷಿಣ ಭಾರತದ ಚಿರಾಪುಂಜಿ ಎಂದೇ ಕರೆಯಲ್ಪಡುವ , ದೇಶದ ಕೆಲವೇ ಕೆಲವು ಮಳೆ ಕಾಡಲ್ಲಿ ಒಂದಾಗಿರುವ ಆಗುಂಬೆ ಹಲವರಿಗೆ ಒಂದು ನಿಘಂಟು. ಅರೀತಸ್ತು ಒಂದು ಸಾಗರ. ಇಲ್ಲಿಯ ಜೀವ ಸಂಕುಲದ ಬಗ್ಗೆ ಅಧ್ಯಯನ ಮಾಡಲು ಇಲ್ಲಿ ಹಲವಾರು ಜನ ಬರುತ್ತಾರೆ. ಹಾಗೆ ಉದ್ಭವಿಸಿದ್ದು ಈ ಸಂಶೋಧನಾ ಕೇಂದ್ರ. ಇಲ್ಲಿಯ ಸರ್ಪಗಳ ಬಗ್ಗೆ, ಇರುವೆಗಳ ಬಗ್ಗೆ, ಕಪ್ಪೆಗಳ ಬಗ್ಗೆ, ಹಾರುವ ಸರಿಸ್ರಪಗಳ ಬಗ್ಗೆ, ಇಲ್ಲಿಯ ಚೇಳು ಬಗ್ಗೆ ಇಲ್ಲಿನ ಮಣ್ಣು ಮತ್ತು ಮೃಗಗಳ ಬಗ್ಗೆ ಇವರ ಸಂಶೋಧನೆ ನಡೀತಾನೇ ಇದೆ. ಕಾಡಿನ ಬಗ್ಗೆ ಕಾಳಜಿ ತೋರಿಸುವ ಈ ಕೇಂದ್ರ ನಮ್ಮಲ್ಲಿ ಅರಿವು ಮೂಡಿಸಲು ಮಾಡುತ್ತಿರುವ ಪ್ರಯತ್ನ ಶ್ಲಾಗನೀಯ.





ಚಾರಣದ ಸಮಯದಲ್ಲಿ ಚರ್ಚೆ ಆದ ಇನ್ನೊಂದು ವಿಷಯವೇನೆಂದರೆ ಇಲ್ಲಿಯ ಜಲಪಾತಗಳು. ಬರ್ಕಣ ಅಲ್ಲದೆ ಇಲ್ಲಿ ಸಾಲು ಸಾಲು ಜಲಪಾತಗಳಿವೆ. ಸಿರಿಮನೆ ಜಲಪಾತ ಇಲ್ಲಿ ತುಂಬಾ ಜನಪ್ರಿಯ. ಇಲ್ಲಿಯ ಕುಂಚಿಕಲ್ ಜಲಪಾತ ದೇಶದ ಎರಡನೇ ಅತಿ ದೊಡ್ಡ ಜಲಪಾತ. ಆದರೆ ಅನುಮತಿ ಇಲ್ಲದೆ ಪ್ರವೇಶವಿಲ್ಲ. ಜೋಗಿ ಗುಂಡಿ , ಕೂಡ್ಲು ತೀರ್ಥ ,ಒನಕೆ ಒಬ್ಬಿ ಕೂಡ ಅಷ್ಟೇ ಸುಂದರವಾಗಿದೆ.



ನಮ್ಮ ಮುಂದಿನ ವಿಚಾರ ಇಲ್ಲಿಯ ಆಹಾರ ಶೈಲಿಯ ಬಗ್ಗೆ ಹರಿದಾಡಿತು. ನಾನು ಮಲೆನಾಡಲ್ಲೇ ಹುಟ್ಟಿದ್ದು ಆದರೂ ನಮ್ಮ ಮೂಲ ಇರುವುದು ಕರಾವಳಿಯ ಭಟ್ಕಳ ತಾಲೂಕಿನಲ್ಲಿ. ಅದಕ್ಕಾಗಿಯೇ ನಮ್ಮಲ್ಲಿ ಎರಡೂ ರೀತಿಯ ಅಡುಗೆ. ಕಾಯಿ ಕಡುಬು ಚಿಕ್ಕಂದಿನಲ್ಲಿ ಅಮ್ಮ ಮಾಡಿದ್ದು ನೆನಪು. ಆದರೆ ಮನೆಯಲ್ಲಿ ಇಡ್ಲಿ ಮತ್ತು ದೋಸೆನೇ ಜಾಸ್ತಿ. ಪಾತೊಳಿ ಮನೆಯಲ್ಲಿ ಮಾಡಿದಾಗ ಒಂದು ರೀತಿಯ ಖುಷಿ. ಅರಿಶಿನದ ಎಲೆಯಲ್ಲಿ ಮಾಡುವ ಈ ಅಕ್ಕಿ ಬೆಲ್ಲ ಕಾಯಿಯ ಈ ಸಿಹಿ ತಿನಿಸು ಬೆಳಗ್ಗೆ ಮಾಡಿದರೆ ರಾತ್ರಿಯವರೆಗೂ ಅದೇ ಹಬ್ಬ. ಮಲೆನಾಡಿಗೆ ಬಂದಾಗ ಅಕ್ಕಿ ರೊಟ್ಟಿ ಮರೆಯಬಾರದು. ಅಕ್ಕಿ ರೊಟ್ಟಿಯ ಜೊತೆ ಕೆಂಪು ಚಟ್ನಿಯ ರುಚಿನೇ ಬೇರೆ. ಹಾಗೆ ಇಲ್ಲಿಯ ಮಿಡಿ ಉಪ್ಪಿನಕಾಯಿ ಮತ್ತು ಹುಳಿ ತಂಬಳಿ ನಿಮ್ಮ ಬಾಯಿಯಲ್ಲಿ ನೀರು ತರೀಸೋದು ಖಂಡಿತ. ಮಿಡಿ ಉಪ್ಪಿನಕಾಯಿಯ ಜೊತೆ ನನ್ನ ಹಲವಾರು ಬಾಲ್ಯದ ನೆನಪು ಅಡಗಿದೆ.




ಆಗುಂಬೆ ಎಂದರೆ ವಿಷಯಗಳಿಗೇನೂ ಕಡಿಮೆ ಇಲ್ಲ. ಒಂದು ದಿವಸ ಇಪ್ಪತ್ತು ಕಿ. ಮೀ. ಚಾರಣ ಮಾಡಿದರೆ ಎರಡನೇ ದಿನ ಏನು ಮಾಡಬಹುದು ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ದೊಡ್ಡ ಪ್ರಶ್ನೆ ಯಾಕಂದರೆ ಇಲ್ಲಿನ ಸುತ್ತಮುತ್ತ ನೋಡುವ ಸ್ಥಳಗಳು ಹಲವಾರು.  ಒಂದು ದಿವಸದಲ್ಲಂತೂ ಆಗಲ್ಲ. ಯಾವುದನ್ನೂ ನೋಡುವುದು ಯಾವುದನ್ನೂ ಬಿಡುವುದು. ಇದರ ಬಗ್ಗೆ ಇನ್ನೊಂದು ಬ್ಲಾಗ್ ಬರೆಯುವೆ.




ಇಂತಹ ಒಂದು ಅದ್ಭುತ ತಾಣ ನಮ್ಮಲ್ಲೇ ಇರುವಾಗ ನಾವು ಇದರ ಬಗ್ಗೆ ಮಾತನಾಡುವುದೇ ಕಡಿಮೆ.
ಆಗುಂಬೆಯ ತಾಣಕ್ಕೆ ಬಂದಾಗ ಇದೊಂದು ವಿಶಿಷ್ಟ ತಾಣ ಎನ್ನುವುದು ನೆನಪಿರಲಿ.  ಕೆಲವೊಂದು ಸಲ ಈ ಆಗುಂಬೆ ಬೆಳೆಯುವುದೇ ಬೇಡ ಅನಿಸುತ್ತದೆ. ತುಂಬಾ ಬೆಳೆದಲ್ಲಿ ಅದರ ನೈಜತೆ ಎಲ್ಲಿ ಕಳೆದುಕೊಳ್ಳುತ್ತದೆ ಎನ್ನುವ ಭೀತಿ. ಆದರೆ ಇದು ಒಂದು ಪ್ರಮುಖ ಪ್ರವಾಸಿ ತ್ರಾಣ ಆಗದಿದ್ದಲ್ಲಿ ಇಲ್ಲಿ ಆಧುನೀಕತೆ ಇನ್ನುವ ವಿಷ ಹೆಮ್ಮರವಾಗಿ ಬೆಳೆದು ಇಲ್ಲಿನ ಕಾಡನ್ನು ನಾಶಮಾಡುವುದಂತೂ ಖಂಡಿತ. ಇಂದು ಇಲ್ಲಿ ಪ್ರವಾಸಿಗಳು ಬರುವುದೇ ಇಲ್ಲಿನ ಕಾಡು ಮತ್ತು ಝರಿಗಳನ್ನು ನೋಡಲು. ಇದರಿಂದಾಗಿ ಇಲ್ಲಿನ ಎಷ್ಟೋ ಜನರ ಹೊಟ್ಟೆಪಾಡಿಗೆ ಒಂದು ಆಧಾರವಾಗಿದೆ. ಅದಕ್ಕಾಗಿಯಾದರೂ ಇಲ್ಲಿನ ಜನ ಈ ಪ್ರಕೃತಿಯನ್ನು ಕಾಪಾಡಿಯೇ ಕಾಪಾಡುತ್ತಾರೆ. ಹಾಗೇ ಕಾಪಾಡಿದಲ್ಲಿ ತಮ್ಮನ್ನಷ್ಟೇ ಅಲ್ಲದೆ ನಮ್ಮನ್ನೂ ಕಾಪಾಡಿದಂತೆ.

ಮರು ಜನ್ಮದ ಬಗ್ಗೆ ನಂಗೆ ಕಿಂಚಿತ್ತೂ ನಂಬಿಕೆ ಇಲ್ಲಾದರೂ , ಮತ್ತೊಮ್ಮೆ ಜನಿಸುವುದಾದರೇ ಈ ಮಲೆನಾಡಲ್ಲೇ ಜನಿಸಬೇಕೆಂಬ ಬಯಕೆ. ಏಕೆಂದರೆ ಸ್ವರ್ಗ ಇಲ್ಲೇ ಇದೆ. ಹಾಗಾದರೇ ನೀವು ಇಲ್ಲಿ ಬಂದಾಗ ಒಬ್ಬ  ಈ ಪ್ರಕ್ರತಿಯ ಮಗನಾಗಿ / ಮಗಳಾಗಿ  ವರ್ತಿಸುತ್ತೀರಾ ತಾನೇ ?
Previous
Next Post »

1 comments:

Write comments
Unknown
AUTHOR
October 25, 2019 at 5:39 AM delete

ತುಂಬಾ ಸೊಗಸಾಗಿದೆ ಬರವಣಿಗೆ.. ಧನ್ಯವಾದಗಳು ಇದನ್ನು ಬರೇದಕ್ಕೆ.. ಮುಂದಿನ ತಿಂಗಳು ಇಲ್ಲಿಗೆ ಹೋಗುವ ಆಲೋಚನೆ ಇದೆ.. ಈ ನಿನ್ನ ಲೇಖನ ನಮ್ಮ ಪ್ರಯಾಣಕ್ಕೆ ಉಪಯೋಗ ಆಗುತ್ತೆ..

Reply
avatar